ಯಮುನೋತ್ರಿ
ಹಿಮಾಲಯದ ಬಂದರ್ ಪೂಂಚ್ ಎಂಬ ಹಿಮಾಚ್ಛಾದಿತ ಶಿಖರದ ವಾಯುವ್ಯದಲ್ಲಿ ಕಲಿಂದ ಪರ್ವತದ ತಪ್ಪಲಿನಲ್ಲಿರುವ ಯಮುನಾ ನದಿಯ ಉಗಮ ಸ್ಥಾನ. ಆ ಪರ್ವತದ ಪಶ್ಚಿಮಭಾಗದಲ್ಲಿ 4,421 ಮೀ. ಎತ್ತರದಲ್ಲಿ ಯಮುನೋತ್ರಿ ದೇವಾಲಯವಿದೆ ಮತ್ತು ಹಲವಾರು ಬಿಸಿನೀರಿನ ಚಿಲುಮೆಗಳಿವೆ. ಅವುಗಳಲ್ಲಿ ಸೂರ್ಯಕುಂಡ, ಅದರ ಬಳಿಯ ದಿವ್ಯಶಿಲೆ ಮುಖ್ಯವಾದವು. ಜಮುನಾಬಾಯಿ ಕುಂಡವನ್ನು ಪವಿತ್ರ ಸ್ನಾನಕ್ಕೆ ಬಳಸುತ್ತಾರೆ. 

	ಯಮುನೋತ್ರಿ ದೇವಸ್ಥಾನವನ್ನು ಅಕ್ಷಯ ತೃತೀಯಾ ಪವಿತ್ರ ದಿನದಂದು ತೆರೆದು ದೀಪಾವಳಿಯಂದು ಮುಚ್ಚುತ್ತಾರೆ. ಯಮುನೋತ್ರಿ ಹರಿದ್ವಾರದಿಂದ 246 ಕಿ.ಮೀ. ಮತ್ತು ಜಾನಕಿಬಾಯಿ ಚಟ್ಟದಿಂದ 6 ಕಿ.ಮೀ. ದೂರದಲ್ಲಿದೆ. ಸ್ವಂತ ವಾಹನದಲ್ಲಿ ಡೆಹರಾಡೂನ್ - ಮುಸ್ಸೋರಿ ಕಡೆಯಿಂದ ಹೋಗಬಹುದಾದರೂ ಸಾರ್ವಜನಿಕ ಸಾರಿಗೆ ಹೃಷಿಕೇಶ್ ಮಾರ್ಗವಾಗಿ ಆ ಸ್ಥಳವನ್ನು ತಲಪುತ್ತದೆ. ಮೇ-ಜೂನ್ ಮತ್ತು ಸೆಪ್ಟೆಂಬರ್ - ಅಕ್ಟೋಬರ್ ಮಾಸಗಳು ಯಮುನೋತ್ರಿ ಯಾತ್ರೆಗೆ ಪ್ರಶಸ್ತ. ನವೆಂಬರ್‍ನಿಂದ ಏಪ್ರಿಲ್‍ವರೆಗೆ ಮಂಜು ಕವಿದಿದ್ದರೆ ಮೇ ಯಿಂದ ನವೆಂಬರ್‍ವರೆಗೆ ಚಳಿ ಮತ್ತು ಜುಲೈನಿಂದ ಸೆಪ್ಟೆಂಬರ್‍ವರೆಗೆ ಮಳೆ ಇರುತ್ತದೆ.  

	ಹೃಷಿಕೇಶದಿಂದ 2 ಕಿ.ಮೀ. ದೂರದ ಮುನೀ-ಕೀ-ರೇತಿ ಎಂಬಲ್ಲಿರುವ ಎರಡು ರಸ್ತೆಗಳಲ್ಲಿ ಒಂದು ಬದರೀನಾಥ ಕೇದಾರನಾಥಕ್ಕೂ ಮತ್ತೊಂದು ಗಂಗೋತ್ರಿ-ಯಮುನೋತ್ರಿಗೂ ಹೋಗುತ್ತದೆ. ಹೃಷಿಕೇಶದಿಂದ 16 ಕಿ.ಮೀ. ದೂರದಲ್ಲಿರುವ ನರೇಂದ್ರನಗರ ನರೇಂದ್ರ ಮಹಾರಾಜರ ಸ್ಥಾನವಾಗಿದ್ದು, ಅಲ್ಲಿ ತೆಹ್ರಿಗಢಾವಾಲದ ಬಹುತೇಕ ಸರ್ಕಾರಿ ಕಚೇರಿಗಳಿವೆ. ಅಲ್ಲಿಂದ 9 ಕಿ.ಮೀ. ದೂರದ ಕುಂಜಪುರಿಯಿಂದ ಹಿಮಾಚ್ಛಾದಿತ ಹಿಮಾಲಯದ ಸುತ್ತುನೋಟದ ಭವ್ಯತೆಯನ್ನು ಸವಿಯಬಹುದು. ಹೃಷಿಕೇಶದಿಂದ 62 ಕಿ.ಮೀ. ದೂರದ ಚಂಬಾದಿಂದ ಬಂದರ್ ಪೂಂಚ್ ಶಿಖರ ಕಾಣುತ್ತದೆ. ಅಲ್ಲಿಂದ ಮುಸ್ಸೋರಿಗೆ ಹೋಗುವ ರಸ್ತೆಯಲ್ಲಿ 55 ಕಿ.ಮೀ. ದೂರದಲ್ಲಿ ಸುರಕಂದಾದೇವಿಯ ಪ್ರಸಿದ್ಧ ಮಂದಿರವಿದೆ. 

	ಅಸಿತ ಮುನಿಗಳು ಅಲ್ಲಿ ನೆಲಸಿದ್ದು ಪ್ರತಿದಿನ ಗಂಗೆ-ಯಮುನೆಯರಲ್ಲಿ ಮೀಯುತ್ತಿದ್ದರಂತೆ. ಅವರ ವೃದ್ಧಾಪ್ಯದಲ್ಲಿ ಆ ಎರಡು ತೀರ್ಥಗಳ ತೊರೆಯೊಂದು ಅವರಿದ್ದಲ್ಲಿಗೆ ಹರಿದುಬರುತ್ತಿತ್ತೆಂದು ಹೇಳಲಾಗುತ್ತದೆ. 

	ಯಮುನೋತ್ರಿಯ ಸ್ವರ್ಗಸದೃಶ ಆಹ್ಲಾದಕರ ವಾತಾವರಣ, ಹಸುರಿನಿಂದ ಕಂಗೊಳಿಸುವ ಪರ್ವತಶ್ರೇಣಿಗಳು. ಒಂದೆಡೆ ಯಮುನೆಯ ಶೀತಲ ಜಲರಾಶಿ, ಮತ್ತೊಂದೆಡೆ ಬಿಸಿನೀರಿನ ಊಟೆಗಳು ಪ್ರಕೃತಿಯ ಸೃಷ್ಟಿ ವೈಚಿತ್ರ್ಯವಾಗಿವೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ